ಚೌಡಿಕೆ ಮೇಳ -
ಸವದತ್ತಿ ಎಲ್ಲಮ್ಮ, ತುಳಜಾಪುರದ ಅಂಬಾ ಭವಾನಿ ಕೊಲ್ಲಾಪುರದ ಅಂಬಾಬಾಯಿ ಈ ದೇವತೆಗಳ ಭಕ್ತರು ಚೌಡಿಕೆಯೆಂಬ ವಾದ್ಯವನ್ನು ನುಡಿಸುತ್ತ ಕಟ್ಟುವ ಮೇಳವೇ ಚೌಡಿಕೆ ಮೇಳ. ಹೀಗೆ ಸ್ತ್ರೀ ದೇವತೆಗಳಿಗೆ ಸಂಬಂಧಿಸಿದ ವೃತ್ತಿಗಾಯಕ ಸಂಪ್ರದಾಯ ಕರ್ನಾಟಕದ ಉತ್ತರ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇಬ್ಬರು ಅಥವಾ ಮೂವರು ಕಲೆತು ಮುಮ್ಮೇಳ ಹಿಮ್ಮೇಳಗಳೊಡನೆ ಕತೆ ಮಾಡುತ್ತಾರೆ. ಉತ್ತರ ಕರ್ನಾಟಕದಲ್ಲಿ ಇದನ್ನು ಗೊಂದಲಿಗರ ಮೇಳ ಎನ್ನಲಾಗುತ್ತದೆ. (ನೋಡಿ- ಗೊಂದಲಿಗರು). ಅಲ್ಲಿ ಗೊಂದಲಿಗ ಪಂಗಡದವರು ಮಾತ್ರ ಗೊಂದಲ ಹಾಕುತ್ತಾರೆ. ಆದರೆ ದಕ್ಷಿಣ ಕರ್ನಾಟಕದ ಚಿತ್ರದುರ್ಗ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಇತರ ಜನಾಂಗದವರೂ ಚೌಡಿಕೆ ಹಿಡಿದು ಮೇಳಗಳನ್ನು ನಡೆಸುತ್ತಾರೆ.

	ಚೌಡಿಕೆ ಎನ್ನುವುದು ಒಂದು ಅಪೂರ್ವ ರೀತಿಯ ವಾದ್ಯ ವಿಶೇಷ. ತಂತೀ ವಾದ್ಯದ ರೀತಿಯಲ್ಲೇ ಇದನ್ನು ಮಾಡಿಕೊಳ್ಳುತ್ತಾರೆ. ಆದರೆ ತಂತಿಯ ಬದಲು ಇದರಲ್ಲಿ ಕುರಿಯ ಕರುಳದಾರವನ್ನು ಬಳಸಲಾಗುತ್ತದೆ. ಕಂಚಿನ ಅಥವಾ ಮರದ ಕೊಳಗದಾಕಾರದ ಸಾಧನವೊಂದಕ್ಕೆ ಈ ದಾರವನ್ನು ಕಟ್ಟಿ ಸಣ್ಣ ಬಿದಿರ ಕೋಲಿನಿಂದ ಅಥವಾ ಕೈಯಿಂದ ಬಿಗಿಯಾಗಿ ಎಳೆದು ಹಿಡಿಯಲಾಗುತ್ತದೆ. ಮರದ ಬೆಣೆಯೊಂದರಿಂದ ಈ ಬಿಗಿಯಾದ ದಾರವನ್ನು ಮೀಟಿದರೆ ಒಳ್ಳೆಯ ನಾದ ಬರುತ್ತದೆ. ಈ ನಾದ ಬರಲು ಮುಖ್ಯ ಕಾರಣ ಕೊಳಗದ ತಳಕ್ಕೆ ಅಳವಡಿಸಿದ ಒಂದು ಬಗೆಯ ಚರ್ಮ. ಕಲಾವಿದರ ಪ್ರಕಾರ ಬಾತುಕೋಳಿಯ, ಮೇಕೆಯ ಧರ್ಮವನ್ನು ಬಳಸಲಾಗುತ್ತದೆ. ಬಿದಿರಿನ ಸಹಾಯದಿಂದ ದಾರವನ್ನು ಎಳೆದು ಬಿಗಿಪಡಿಸಿಕೊಳ್ಳುವ ವಾದ್ಯ ಶ್ರುತಿ. ಕೈಯಲ್ಲೇ ಎಳೆದು ಬಿಗಿಪಡಿಸಿಕೊಳ್ಳುವುದು ಮುಖ್ಯವಾದ್ಯ. ಈ ಎರಡು ಚೌಡಿಕೆಗಳನ್ನೂ ಮೇಳದಲ್ಲಿ ಗೊಂದಲಗಳಲ್ಲಿ ಬಳಸುತ್ತಾರೆ. ದೇವಿಯ ಪೂಜಾ ಸಂದರ್ಭದಲ್ಲಿ ಇದನ್ನು ನುಡಿಸುತ್ತಾ ಹಾಡುತ್ತಾರೆ. ಉಳಿದ ಸಂದರ್ಭದಲ್ಲಿ ಗದ್ದಿಗೆಯ ಮೇಲೆ ಇಟ್ಟು ಪೂಜಿಸುತ್ತಾರೆ. ಇದು ದೇವಿಯ ಸಂಕೇತವಾದುದರಿಂದ ಪೂಜಾವಸ್ತುವೆನಿಸುತ್ತದೆ.

	ಚೌಡಿಕೆ ಪರಶುರಾಮನ ವಾದ್ಯ ಎನ್ನಲಾಗಿದೆ. ಎಲ್ಲಮ್ಮ ರೇಣುಕೆಯ ಅವತಾರವೆಂಬ ನಂಬಿಕೆ ಇದಕ್ಕೆ ಮುಖ್ಯ ಕಾರಣ. ತನ್ನ ತಾಯಿಯನ್ನು ಪ್ರಸನ್ನಗೊಳಿಸಲು ಕಾರ್ತವೀರ್ಯಾರ್ಜುನನನ್ನು ಕೊಂದು ಅವನ ಶರೀರದಿಂದ ಒಂದು ವಾದ್ಯವನ್ನು ಮಾಡಿಕೊಂಡು ಪರಶುರಾಮ ನುಡಿಸುತ್ತ ಬಂದ. ರೇಣುಕೆಯ ಎದುರು ಅದನ್ನು ನುಡಿಸುತ್ತ ಹಾಡಿ, ಕುಣಿದು ಅವಳನ್ನು ಸಂತುಷ್ಟಳನ್ನಾಗಿ ಮಾಡಿದ. ಪರಶುರಾಮನ ಪರಂಪರೆಗೆ ಸೇರಿದವರೆನ್ನಲಾದ ಈ ಭಕ್ತರೂ ಚೌಡಿಕೆಯಿಂದ ಎಲ್ಲಮ್ಮನನ್ನು ಸಂತುಷ್ಟಿಗೊಳಿಸುತ್ತಾರೆ.

	ಚೌಡಿಕೆ ಮೇಳದಲ್ಲಿ ಗೊಂದಲಿಗರ ಮೇಳದಂತೆ ಸಮೇಳ ಬಳಸುವ ಪದ್ಧತಿಯಿಲ್ಲ. ಭಾಗವಹಿಸುವ ಇಬ್ಬರು ಕಲಾವಿದರೂ ಒಂದೊಂದು ಚೌಡಿಕೆಯನ್ನು ಹಿಡಿದಿರುತ್ತಾರೆ. ಮೇಳಕ್ಕೆ ಒಂದು ಸಣ್ಣ ಚಪ್ಪರವಾದರೆ ಸಾಕು. ಒಬ್ಬ ಕಲಾವಿದ ಮುಖ್ಯ ಕಥೆಯನ್ನು ಚೌಡಿಕೆಯ ಗತ್ತಿಗೆ ಹಾಡುತ್ತ ಕುಣಿಯುತ್ತಾನೆ. ಮತ್ತೊಬ್ಬ ಅದಕ್ಕೆ ಶ್ರುತಿ ಹಿಡಿದು ತಾನೂ ಭಾಗವಹಿಸುತ್ತಾನೆ. ಹಿಮ್ಮೇಳ ಹಾಡುತ್ತಾನೆ. ನಡುನಡುವೆ ಗದ್ಯನಿರೂಪಣೆಯೂ ಬರುತ್ತದೆ.

	ಚೌಡಿಕೆ ಮೇಳದ ಮುಖ್ಯ ಕಥೆ ಎಲ್ಲಮ್ಮನಿಗೆ ಸಂಬಂಧಪಡುತ್ತದೆ. ಇದು ಚೌಡಿಕೆಯವರ ಧಾರ್ಮಿಕ ಕಥೆ. ಇದರ ಜೊತೆಗೆ ಅನೇಕ ಲೌಕಿಕ ಕಥೆಗಳನ್ನೂ ಅವರು ಬಳಸಿಕೊಳ್ಳುವುದುಂಟು. ಸರ್ಜಪ್ಪನಾಯಕನ ಕಥೆ ಇಲ್ಲಿ ಮುಖ್ಯವಾದುದು. ತರೀಕೆರೆ ಪಾಳೆಯಗಾರರ ಪರಂಪರೆಯಲ್ಲಿ ಅತ್ಯಂತ ಪ್ರಬಲನಾದ ಸರ್ಜಪ್ಪನಾಯಕನ ಸಾಹಸವನ್ನು ಬಣ್ಣಿಸುವ ಕಥೆ ಚೌಡಿಕೆಯವರಲ್ಲಿ ಮಾತ್ರ ಉಳಿದಿದೆ. ಇದಕ್ಕೆ ಕಾರಣ ಸರ್ಜಪ್ಪನಾಯಕನೂ ಎಲ್ಲಮ್ಮನ ಭಕ್ತ. ಬಸವಕುಮಾರ-ಲೋಹಿತಕುಮಾರರ ಕಥೆಯೂ ಚೌಡಿಕೆಯವರಲ್ಲಿ ಜನಪ್ರಿಯವಾಗಿದೆ. ಕರಪಾಲಮೇಳದಂತೆ ಚೌಡಿಕೆಮೇಳವೂ ಸಾಹಿತ್ಯ ನೃತ್ಯ ಹಾಗೂ ಸಂಗೀತಗಳಿಂದ ಮುಪ್ಪುರಿಗೊಂಡ ಕಲೆ. ಕರಿಯ ನಿಲುವಂಗಿ, ಬಿಳಿಯ ರುಮಾಲು, ಕಚ್ಚೆ ಪಂಚೆ, ನಡುಪಟ್ಟಿ-ಇವುಗಳಿಂದ ಅಲಂಕೃತರಾಗಿ ಚೌಡಿಕೆಯವರು ರಂಗಕ್ಕೆ ಸಜ್ಜಾಗುತ್ತಾರೆ. ಕಾಲಿಗೆ ಗೆಜ್ಜೆ ಕಟ್ಟಿಕೊಂಡು ನೃತ್ಯಕ್ಕೆ ಅನುವಾಗುತ್ತಾರೆ. ಚೌಡಿಕೆಯ ಜೊತೆಗೆ ಮತ್ತೆ ಯಾವ ಪೋಷಕ ವಾದ್ಯಗಳನ್ನೂ ಇವರು ಬಳಸುವುದು ವಿರಳ. ತುರುವೇಕೆರೆ ತಾಲ್ಲೂಕಿನ ಚಿಕ್ಕತುರುವೇಕೆರೆಯ ಚೌಡಿಕೆ ಎಲ್ಲಯ್ಯನವರ ಮೇಳ ಅತ್ಯಂತ ಜನಪ್ರಿಯವಾದುದು.
(ಜೆ.ಎಸ್.ಪಿ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ